ಮನೆಯಂಗಳದಲ್ಲಿ ಬೆಳಿಗ್ಗೆ ಆಕರ್ಷಕ ಬಣ್ಣಗಳಿಂದ ನಳನಳಿಸುವ ಹೂವು ನಿತ್ಯಪೂಜೆಗೆ ಸದಾ ಸಿಗುತ್ತದೆ. ಆಕಾರದಲ್ಲಿ ಹೆಚ್ಚು ಕಡಿಮೆ ಕರವೀರ ಪುಷ್ಪವನ್ನೇ ಹೋಲುವ ಸುಂದರ ಹೂವು ಗೊರಟಿಗೆ. ಈ ಹೂವಿಗೆ ಘಮ್ಮೆನ್ನುವ ಸುಗಂಧ ಇರದಿದ್ದರೂ ಅಂದದ ಬಣ್ಣದಿಂದಲೇ ಹೂವು ಪ್ರಿಯರನ್ನು ಸೆಳೆಯುವ ಗೊರಟಿಗೆ ಪೂಜೆಗೆ, ಅಲಂಕಾರಕ್ಕೆ, ಮುಡಿಯಲು.. ಹೀಗೆ ನಾನಾ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಕಡುನೀಲಿ, ನೇರಳೆ, ಬಿಳಿ, ತಿಳಿ ಗುಲಾಬಿ, ಕೆಂಪು, ಹಳದಿ ಮುಂತಾದ ಬಣ್ಣಗಳಿಂದ ಗಿಡ ತುಂಬಾ ಹೂವು ಬಿಡುವ ಗೊರಟಿಗೆ ಕೈತೋಟದಲ್ಲಿ ಎದ್ದುಕಾಣುವ ಆಕರ್ಷಕ ಸೌಂದರ್ಯ ಹೊಂದಿದೆ.
ಗೊರಟೆ, ಗೊರಟಿಗೆ, ಸ್ಫಟಿಕ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ಈ ಹೂವು ಬೆಳಿಗ್ಗೆ ಬೇಗನೆ ಅರಳುತ್ತದೆ. ಸೂರ್ಯನ ಕಡುಬಿಸಿಲು ಇದ್ದರೂ ಬೇಗನೆ ಬಾಡುವ ಗುಣ ಇದಕ್ಕಿಲ್ಲ.
ಇದೇ ಹೆಸರಿನಿಂದ ಕರೆಯುವ ಗೊರಟೆ ಹೂವುಗಳ ಇನ್ನೊಂದು ಪ್ರಬೇಧದಲ್ಲಿ ಹಳದಿ ಬಣ್ಣದ ಹೂವುಗಳೂ ಅರಳುತ್ತವೆ. ಕಡುಗೆಂಪು ಬಣ್ಣದ ಹೂವುಗಳೂ ರಕ್ತಗೊರಟಿಗೆ ಎಂದು ಪ್ರಸಿದ್ಧ. ಹಳದಿ ಗೊರಟೆ ಗಿಡದಲ್ಲಿ ಮುಳ್ಳುಗಳಿರುತ್ತವೆ. ಗೊರಟೆ ಹೂವುಗಳು ಇಡೀ ಹೂತೋಟಕ್ಕೆ ವಿಶೇಷ ಮೆರುಗು ನೀಡುವಂಥವು. ಇದು ಪೊದೆಗಳಂತೆ ಬೆಳೆಯುವ ಸಸ್ಯ. ಎಲೆಗಳು ಕಡು ಹಸುರು ಮತ್ತು ಎಲೆಯ ಕೆಳಭಾಗ ತಿಳಿಹಸುರು ಬಣ್ಣದ್ದಾಗಿದೆ. ಸಂಸ್ಕೃತದಲ್ಲಿ ಈ ಗಿಡಕ್ಕೆ ‘ಸಹಚಾರ, ಸರೈಕಾ’ ಮುಂತಾದ ಹೆಸರುಗಳಿವೆ. ಬರ್ಲೇರಿಯ ಕ್ರಿಸ್ಟಾಟ ಎಂಬ ವೈಜ್ಞಾನಿಕ ಹೆಸರಿರುವ ಇದು ‘ಅಕಾಂತಸೀ’ ಸಸ್ಯ ಕುಟುಂಬಕ್ಕೆ ಸೇರಿದೆ. ಗಿಡ ಪೊದೆಯಾಕಾರದಲ್ಲಿದ್ದು ಸುಮಾರು 60ರಿಂದ 100 ಸೆಮೀ ಎತ್ತರ ಬೆಳೆಯುತ್ತದೆ. ಐದು ಸೆಮೀ ಉದ್ದದ ಹೂವು ಬಿಡುತ್ತದೆ. ಹಣ್ಣುಗಳು 1.5 ಸೆಮೀ ಇರುತ್ತದೆ.
ಔಷಧೀಯ ಗುಣಗಳು
ಗೊರಟಿಗೆ ಗಿಡ ಔಷಧೀಯ ಗುಣಗಳನ್ನೂ ಹೊಂದಿರುವ ಸಸ್ಯ. ಇದರ ನಿರ್ವಹಣೆಗೆ ಹೆಚ್ಚಿನ ಶ್ರಮ ಬೇಕಾಗಿಲ್ಲ. ರಸಗೊಬ್ಬರ, ಸದಾ ನೀರು, ನೆರಳು ವಿಶೇಷ ಆರೈಕೆ ಬಯಸದ ವಿಶಿಷ್ಟ ಸಸ್ಯ ಹೂವಿನ ಸೌಂದರ್ಯದ ಜತೆಗೆ ಔಷಧಕ್ಕೂ ಬಳಕೆಯಾಗುತ್ತದೆ.
ಗೊರಟಿಗೆ ಗಿಡದ ಎಲೆಯನ್ನು ಹಲ್ಲುನೋವು ಮತ್ತು ಸಂಧಿವಾತ ನಿವಾರಣೆಗೆ ಬಳಸುತ್ತಾರೆ. ಈ ಗಿಡದ ಬೇರು ಸಹ ಕೀಲು ನೋವು ನಿವಾರಣೆಗೆ ಸಹಕಾರಿ. ಗೊರಟಿಗೆ ಗಿಡದ ಎಲೆಯನ್ನು ಕೆಮ್ಮು, ಕಿವಿನೋವು ಮತ್ತು ಹಿಮ್ಮಡಿ ಒಡೆದ ನೋವುಗಳಿಗೆ ಪರಿಹಾರವಾಗಿ ಬಳಸುವುದಿದೆ.
ಸೆಪ್ಟೆಂಬರ್ನಿಂದ ಡಿಸೆಂಬರ್ವರೆಗೆ ಯಥೇಚ್ಛವಾಗಿ ಹೂವು ಬಿಡುತ್ತದೆ. ಉಳಿದ ಕಾಲಗಳಲ್ಲಿ ಹೂವು ಬಿಡುವ ಸಂಖ್ಯೆ ಕಡಿಮೆ. ಮನೆಯಂಗಳದಲ್ಲಿ ಇರಲೇ ಬೇಕಾದ ಈ ಗಿಡ ಕೆಲವೆಡೆ ಅಳಿವಿನ ಅಂಚಿನಲ್ಲಿ ಇದ್ದು, ಉಳಿಸಿ ಬೆಳೆಸಬೇಕಾದ ಅನಿವಾರ್ಯತೆಯೂ ಇದೆ. g